ಕೃಷ್ಣಮಾಚಾರ್ಯ, ಶ್ರೀರಂಗಪಟ್ಟಣದ

ದ್ರಾವಿಡ ಭಾಷಾಶಾಸ್ತ್ತ್ರದ ಜನಕನೆಂದು ಪ್ರಸಿದ್ಧನಾಗಿರುವ ಫ್ರಾನ್ಸಿಸ್ ವೈಟ್ ಎಲ್ಲಿಸ್‍ನನ್ನು ಬಿಟ್ಟರೆ ಆ ಸಾಲಿನಲ್ಲಿ ಬರುವ ಎರಡನೆಯ ವ್ಯಕ್ತಿಯೇ ಕೃಷ್ಣಮಾಚಾರ್ಯ. ಈತ ಹೊಸಗನ್ನಡ ನುಡಿಗನ್ನಡಿ ಎಂಬ ವ್ಯಾಕರಣದ ಕರ್ತೃ. ತನ್ನ ಪುಸ್ತಕದ ಮುನ್ನುಡಿಯಲ್ಲಿ ಈತ ತನ್ನನ್ನು ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ ಎಂದು ಹೇಳಿಕೊಂಡಿದ್ದಾನೆ. ಮೈಸೂರಿಗೆ ಹತ್ತು ಮೈಲಿ ದೂರದಲ್ಲಿರುವ, ಟಿಪ್ಪುಸುಲ್ತಾನನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣವೇ ಈತನ ಹುಟ್ಟೂರು. ಮೈಸೂರಿನ ಸುತ್ತಮುತ್ತಲ ಪ್ರದೇಶವನ್ನು ಅಚ್ಚಗನ್ನಡ ನಾಡೆಂದು ಕರೆದು ಅಲ್ಲಿನ ಹಿರಿಯರು ಮಾತನಾಡುವ ಕನ್ನಡವನ್ನು ಆಧಾರವಾಗಿಟ್ಟುಕೊಂಡು ಈ ಗ್ರಂಥವನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ಹೆಸರನ್ನು ನೋಡಿದರೆ ಈತ ಶ್ರೀವೈಷ್ಣವ ಬ್ರಾಹ್ಮಣನೆಂದು ಗೊತ್ತಾಗುತ್ತದೆ. ತಮಿಳು ಈತನ ಮಾತೃಭಾಷೆಯಾಗಿರಬೇಕು. ಮೊದಲು ವಿದ್ಯಾರ್ಥಿಯಾಗಿ ಅನಂತರ ಪ್ಲೀಡರ್ ಆಗಿ ಮದ್ರಾಸಿನಲ್ಲಿ ಬಹಳ ಕಾಲವಿದ್ದುದರಿಂದ ಈತ ತಮಿಳಿನಲ್ಲಿ ಹೆಚ್ಚಿನ ಪಾಂಡಿತ್ಯವನ್ನು ಗಳಿಸಿಕೊಂಡಿರಬೇಕು. ಅದಕ್ಕೆ ಈತನ ಪುಸ್ತಕವೇ ಸಾಕ್ಷಿಯಾಗಿದೆ. ಜೊತೆಗೆ ಈತನ ಹೇಳಿಕೆಗಳನ್ನು ನೋಡಿದರೆ ಇವನಿಗೆ ಮಲಯಾಳ, ತುಳು, ಸಂಸ್ಕøತ ಮುಂತಾದ ಭಾಷೆಗಳ e್ಞÁನವೂ ಇದ್ದಂತೆ ಕಾಣುತ್ತದೆ.

ಶಬ್ದೋತ್ಪತ್ತಿ ಕ್ರಮವು 'ಶಬ್ದಮಂಜರಿ', 'ಧಾತುಮಂಜರಿ'ಗಳಲ್ಲಿ ಹೇಳಲ್ಪಡುವುದು-ಎಂದು ತನ್ನ ಗ್ರಂಥದ ಮುನ್ನುಡಿಯಲ್ಲಿ ಹೇಳಿಕೊಂಡಿರುವುದರಿಂದ ಈತ ಇನ್ನೆರಡು ಗ್ರಂಥಗಳನ್ನು ಬರೆದಿರಬಹುದೆಂದು ಊಹಿಸಬಹುದು. ಹಳಗನ್ನಡ, ನುಡಿಗನ್ನಡಿ, ಹೊಸಗನ್ನಡ ನುಡಿಗನ್ನಡಿ, ಶಬ್ದಮಂಜರಿ, ಧಾತುಮಂಜರಿ ಎಂಬ ಗ್ರಂಥಗಳನ್ನು ಈತ ಬರೆದಿದ್ದಾನೆ ಎಂದು ಕವಿಚರಿತೆಕಾರರ ಅಭಿಪ್ರಾಯ. ಈಗ ದೊರೆತಿರುವ ಗ್ರಂಥವೊಂದನ್ನು ಬಿಟ್ಟರೆ ಉಳಿದ ಗ್ರಂಥಗಳನ್ನು ಈತ ಬರೆದಂತೆ ಕಾಣುವುದಿಲ್ಲ. ಒಂದು ವೇಳೆ ಬರೆದಿದ್ದರೂ ಅವು ದೊರೆತಿಲ್ಲ.

ಈಗ ದೊರೆತಿರುವ ಈತನ ಗ್ರಂಥವಾದ ಹೊಸಗನ್ನಡ ನುಡಿಗನ್ನಡಿ ಎಂಬುದು ಹೊಸಗನ್ನಡವನ್ನು ಕುರಿತಾಗಿ ಕನ್ನಡದಲ್ಲಿ ಬರೆದಿರುವ ವ್ಯಾಕರಣ ಗ್ರಂಥ. ಹೊಸಗನ್ನಡ ವ್ಯಾಕರಣವನ್ನು ಕುರಿತು ಈತ ಪುಸ್ತಕವನ್ನು ಬರೆಯುವುದಕ್ಕೆ ಮೊದಲು ಇಂಗ್ಲಿಷಿನಲ್ಲಿ ವಿಲಿಯಂ ಕ್ಯಾರಿ ಎಂಬಾತ ಮೊದಲನೆಯದಾಗಿ 1817ರಲ್ಲಿ ಕನ್ನಡ ಭಾಷೆಯ ಒಂದು ವ್ಯಾಕರಣವನ್ನು ಬರೆದಿದ್ದ. ಇದು ಸರಾಂಪುರದಲ್ಲಿ ಅಚ್ಚಾಗಿದೆ. ಎರಡನೆಯದಾಗಿ ಜಾನ್‍ಮೆಕ್ಕರಲ್ ಇಂಗ್ಲೀಷಿನಲ್ಲಿಯೇ ಮತ್ತೊಂದು ಕನ್ನಡ ಭಾಷೆಯ ವ್ಯಾಕರಣವನ್ನು 1820ರಲ್ಲಿ ಬರೆದಿದ್ದ. ಇದು ಮದ್ರಾಸಿನಲ್ಲಿ ಅಚ್ಚಾಯಿತು. ಇದೇ ಪಂಕ್ತಿಯಲ್ಲಿ ಹೊಸಗನ್ನಡದ ಬಗ್ಗೆ ಬಂದ ಮೂರನೆಯ, ಆದರೆ ಕನ್ನಡದಲ್ಲಿ ಮೊದಲನೆಯ, ಗ್ರಂಥ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯನ ಹೊಸಗನ್ನಡ ನುಡಿಗನ್ನಡಿ. ಇದು ಕಾಲ್ಡ್ ವೆಲ್ಲನ ದ್ರಾವಿಡಭಾಷೆಗಳ ತೌಲನಿಕ ವ್ಯಾಕರಣ ಗ್ರಂಥ ಬರುವುದಕ್ಕೆ 18 ವರ್ಷಗಳ ಮೊದಲು ದೇಶ ಭಾಷೆಯಲ್ಲಿ ಹೊರಬಂತು. ಆಗ ಪ್ರಚಾರದಲ್ಲಿದ್ದ ಪದ್ಧತಿಯನ್ನನುಸರಿಸಿ ಪ್ರಶ್ನೋತ್ತರರೂಪದಲ್ಲಿ ಈ ಗ್ರಂಥವನ್ನು ಬರೆಯಲಾಗಿದೆ. ಲೇಖಕ ಎಲ್ಲಿಸನ ಪ್ರಭಾವಕ್ಕೊಳಗಾಗಿರಬೇಕು. ಗ್ರಂಥದ ಮೊದಲ ಮುದ್ರಣದ ಪ್ರತಿಗಳು ಸಂಪೂರ್ಣವಾಗಿ ತೀರಿಹೋಗಿವೆ. ಮೈಸೂರಿನ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಒಂದು ಪ್ರತಿಮಾತ್ರ ಇದೆ. ಅದರಲ್ಲಿಯೂ ಮುಖಪುಟಗಳು ಕಾಣೆಯಾಗಿವೆ. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿ ಮುಖಪುಟವಿರುವ ಪ್ರತಿಯೊಂದಿದೆ. ಪ್ರತಿಗಳು ತೀರ ದುರ್ಲಭವಾದುದರಿಂದ ಮಂಗಳೂರಿನ ಬಾಸೆಲ್ ಮಿಷನ್ ಅಂಡ್ ಟ್ರ್ಯಾಕ್ಟ್ ಡಿಪಾಸಿಟರಿ ಅವರು 1882ರಲ್ಲಿ ಎರಡನೆಯ ಮುದ್ರಣವನ್ನು ತಂದರು. ಈ ಮುದ್ರಣದ ಪ್ರತಿಗಳೂ ಈಗ ಸಿಗುವುದು ಕಠಿಣವಾಗಿದೆ. ಎರಡನೆಯದು ಮೊದಲ ಮುದ್ರಣದ ಪಡಿಯಚ್ಚು. ಮೊದಲ ಮುದ್ರಣದ ಕೆಲವು ಅಚ್ಚುದೋಷಗಳನ್ನು ಸರಿಪಡಿಸಲಾಗಿದೆ. ಹೊಸ ಕಾಲದ ವಿರಾಮ ಚಿಹ್ನೆಗಳನ್ನು ಬಳಸಲಾಗಿದೆ.

ಈ ಗ್ರಂಥವನ್ನು ಬರೆಯುವ ಕಾಲಕ್ಕೆ ಲೇಖಕ ಚೆನ್ನಪಟ್ಟಣದಲ್ಲಿ ಅಂದರೆ ಈಗಿನ ಮದ್ರಾಸಿನಲ್ಲಿ ಸದರದಾಲತ್ತು ಕೋರ್ಟಿನಲ್ಲಿ ವಕೀಲನಾಗಿಯೂ ಪಂಡಿತ ಹುದ್ದೆಗೆ ಬೇಕಾದ ಯೋಗ್ಯತಾಪತ್ರಿಕೆಯನ್ನು ಪಡೆದವನಾಗಿಯೂ ಇದ್ದು ಫೋಟ ಸೇಂಟ್ ಜಾರ್ಜ್ ಕಾಲೇಜಿನಲ್ಲಿ (ಎಲ್ಲಿಸ್ ಅಧಿಕಾರಿಯಾಗಿದ್ದ ಕಾಲೇಜು) ಪಂಡಿತ ವಿದ್ಯಾರ್ಥಿಯ ಉದ್ಯೋಗದಲ್ಲಿದ್ದ. ಆಗ ಆ ಕಾಲೇಜು ಬೋರ್ಡಿನ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಹಾರ್ಕಿನ್ 'ಇಂಗ್ಲಿಷೂ ಕನ್ನಡವೂ ತಿಳಿಯದ ವಿದ್ಯಾರ್ಥಿಗಳಿಗೆ ಸುಲಭವಾಗಿ ತಿಳಿಯುವ ಹಾಗೆ ಕನ್ನಡದಲ್ಲಿ ಪ್ರಶ್ನೋತ್ತರ ರೂಪವಾಗಿ ಒಂದು ವ್ಯಾಕರಣವನ್ನು ಬರೆಯುವಂತೆ ಸೂಚಿಸಿದ್ದರಿಂದ ಈ ಗ್ರಂಥವನ್ನು ಬರೆದುದಾಗಿ ಹೇಳಿಕೊಂಡಿದ್ದಾನೆ. ಆದರೆ ಹಾರ್ಕಿನ್ ತ್ವರೆಯಾಗಿ ಸ್ವದೇಶಕ್ಕೆ ಹೊರಟುಹೋದುದರಿಂದ ಪುಸ್ತಕ ಹೊರಗೆ ಬರಲು ಸಾಧ್ಯವಾಗಲಿಲ್ಲ. ಕೆಲಕಾಲದ ಮೇಲೆ ಸಿವಿಲ್ ಉದ್ಯೋಗಸ್ಥ ಜಾನ್‍ವಾಕರ್ ಸ್ವತ: ಸಂಸ್ಕøತ, ಕನ್ನಡ, ದ್ರಾವಿಡ, ಹಿಂದೂಸ್ಥಾನಿ ಮುಂತಾದ ದೇಶ ಭಾಷೆಗಳಲ್ಲಿ ಶ್ರಮವುಳ್ಳವನೂ ದೇಶಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದವನೂ ಧನಸಹಾಯಮಾಡಿ ಇತರರಿಂದ ಕೃತಿರಚನೆ ಮಾಡಿಸಿದವನೂ ಆದುದರಿಂದ, ಕೃಷ್ಣಮಾಚಾರ್ಯನ ವ್ಯಾಕರಣ ಗ್ರಂಥದ ಹಸ್ತಪ್ರತಿಯನ್ನು ಅಮೂಲಾಗ್ರವಾಗಿ ಓದಿ ಉಪಯುಕ್ತ ಗ್ರಂಥವೆಂದು ಕಂಡುಬಂದ ಮೇಲೆ ಅದರ ಪ್ರಕಟಣೆಯ ಭಾರವನ್ನು ಹೊತ್ತು ಪುಸ್ತಕ ಹೊರಬರುವಂತೆ ಮಾಡಿದುದರಿಂದ 1938ರಲ್ಲಿ ಗ್ರಂಥ ಅಚ್ಚಾಗಿ ಹೊರಬಂತು.

ಅಚ್ಚಗನ್ನಡ ದೇಶದಲ್ಲಿರುವ ತನ್ನ ಕಾಲದ ಹಿರಿಯವರು ಮಾತನಾಡುವ ಹೊಸಗನ್ನಡವನ್ನು ಆಧರಿಸಿ ಈ ಗ್ರಂಥವನ್ನು ಬರೆದಿದ್ದೇನೆಂದು ಗ್ರಂಥದಲ್ಲಿ ಲೇಖಕ ಹೇಳಿಕೊಂಡಿದ್ದಾನೆ. ಗ್ರಂಥದಲ್ಲಿ ಗ್ರಾಮ್ಯ ಪದಗಳನ್ನು ಧಾರಾಳವಾಗಿ ಬಳಸಲಾಗಿದೆ. ಉದಾ: ತಿನ್ತಾನೆ, ಬಂತು ಇತ್ಯಾದಿ. ಸಂಧಿಪದಗಳಲ್ಲಿ-ಓಢೋದ್ನು, ಕೆಟ್ಹೋಯಿತು ಇತ್ಯಾದಿ. ಕೆಲೆವೆಡೆ ಹಳೆಯ ರೂಪಗಳೂ ಸಿಗುತ್ತವೆ. ಉದಾ: ಹನ್ನಿಬ್ಬರ (12 ಎಂಬಲ್ಲಿ) ಅಗ¿õÉ್ತ, ಕಾಲುರಿಚ-ಇತ್ಯಾದಿ. ಶೀನೀರು, ಅನುಸರಿಶಿ ಮುಂತಾದ ಪ್ರಯೋಗಗಳೂ ಕೆಲವೆಡೆ ಬಂದಿವೆ.

ಈತ ತನ್ನ ವ್ಯಾಕರಣವನ್ನು ಕೇಶಿರಾಜನ ಶಬ್ದಮಣಿದರ್ಪಣದ ಮಾದರಿಯಲ್ಲಿಯೇ ಬರೆದಿದ್ದಾನೆ. ತನ್ನ ಕೃತಿಯಲ್ಲಿ ಭಟ್ಟಾರಳಂಕನನ್ನು ಹೆಸರಿಸಿದ್ದಾನೆ. ಆದರೆ ನಾಗವರ್ಮನನ್ನು ಮಾತ್ರ ನೆನೆದಿಲ್ಲ. ಕನ್ನಡ ವೈಯಾಕರಣಿಗಳು ಹಿಂದಿನವರನ್ನು ಸ್ಮರಿಸುವಂತೆ ಈತ ತನಗಿಂತ ಹಿಂದಿನ ವೈಯಾಕರಣನಾದ ಜಾನ್ ಮೆಕ್ಕರೆಲ್‍ನ ಪುಸ್ತಕವನ್ನು ಹೆಸರಿಸುತ್ತಾನೆ, ಆದರೆ ವಿಲಿಯಂ ಕ್ಯಾರಿಯನ್ನು ಹೆಸರಿಸುವುದಿಲ್ಲ.  ಗ್ರಂಥದಲ್ಲಿ ಹತ್ತು ಅಧ್ಯಾಯಗಳಿವೆ. 1 ಸಂe್ಞÁಪ್ರಕರಣ, 2 ಸಂಧಿ ಪ್ರಕರಣ, 3 ಶಬ್ದ ಪ್ರಕರಣ, 4 ಅಖ್ಯಾತ ಪ್ರಕರಣ, 5 ಕೃದಂತ ಪ್ರಕರಣ, 6 ತದ್ಧಿತ ಪ್ರಕರಣ, 8 ತದ್ಭವ ಪ್ರಕರಣ, 9 ಸಮಾಸ ಪ್ರಕರಣ ಮತ್ತು 10 ಪ್ರಯೋಗ ಪ್ರಕರಣ. ಈ ಒಂದೊಂದು ಪ್ರಕರಣದಲ್ಲೂ ಪಾರಿಭಾಷಿಕ ಪದಗಳಿಗೆ ಇಂಗ್ಲಿಷ್ ಸಮಾನಪದಗಳನ್ನು ಕೊಡಲಾಗಿದೆ.

ತತ್ಸಮ, ತದ್ಭವಗಳನ್ನು ಕುರಿತು ಹೇಳುವಾಗ ಕೇಶಿರಾಜ, ಭಟ್ಟಾಕಳಂಕರಂತೆ ಈ ಶಬ್ದಗಳು ಕೇವಲ ಸಂಸ್ಕøತದಿಂದ ಮಾತ್ರ ಕನ್ನಡಕ್ಕೆ ಬಂದುವು ಎಂದಷ್ಟೇ ಹೇಳದೆ, ದ್ರಾವಿಡ ಭಾಷೆಯಿಂದಲೂ ಬಂದವು ಎಂದು ಹೇಳಲಾಗಿದೆ.

ಹಿಂದಿನ ವೈಯಾಕರಣಿಗಳಂತೆ ಶಬ್ದಗಳನ್ನು ತತ್ಸಮ, ತದ್ಭವ, ದೇಶ್ಯಗಳೆನ್ನದೆ, ಅನ್ಯದೇಶ್ಯ, ಗ್ರಾಮ್ಯ ಶಬ್ದಗಳನ್ನೂ ಪಟ್ಟಿಹಾಕಲಾಗಿದೆ.

ನಾಗವರ್ಮ, ಕೇಶಿರಾಜ, ಭಟ್ಟಾಕಳಂಕರು ಹಳಗನ್ನಡದ, ಅದರಲ್ಲೂ ಗ್ರಂಥಸ್ಥ ಭಾಷೆಯ, ವ್ಯಾಕರಣವನ್ನು ಬರೆದಂತೆ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ ಹತ್ತೊಂಬತ್ತನೆಯ ಶತಮಾನದಲ್ಲಿ ಹೊಸಗನ್ನಡದ, ಅಚ್ಚಗನ್ನಡ ದೇಶದಲ್ಲಿ ಆಗಿನ ಹಿರಿಯರು ಮಾತನಾಡುತ್ತಿದ್ದ ಕನ್ನಡ ಭಾಷೆಯ ವ್ಯಾಕರಣವನ್ನು ಬರೆದು ಮಹೋಪಕಾರ ಮಾಡಿದ್ದಾನೆ.			
 (ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ